ಇನ್ಯಾ ಅಲ್ಲಾಖಾನ್
1756-1818. ಆಧುನಿಕ ಹಿಂದೀ ಸಾಹಿತ್ಯದ ಆದ್ಯ ಆಚಾರ್ಯ ಪುರುಷರಲ್ಲಿ ಒಬ್ಬ. ಖಡೀಬೋಲಿ ಗದ್ಯಸಾಹಿತ್ಯದ ಸುಂದರ ಮಾದರಿಯನ್ನು ಪ್ರಥಮವಾಗಿ ರೂಪಿಸಿದಾತ. ಉರ್ದು ಕವಿಯಾಗಿದ್ದರೂ ಆಧುನಿಕ ಹಿಂದೀ ಸಾಹಿತ್ಯದ ಮೊದಲ ಕಥೆಯನ್ನು ಬರೆದ ಕೀರ್ತಿವಂತ, ಸಂಸ್ಕøತ, ಬ್ರಜ ಹಾಗೂ ಉರ್ದುಗಳ ಹಾವಳಿಗೆ ಸಿಲುಕಿದ್ದ ಹಿಂದಿಯನ್ನು ಈತ ಮುಕ್ತಗೊಳಿಸಿದ. ತನ್ನ ವಿಖ್ಯಾತ ರಾನೀ ಕೇತಕಿ ಕೀ ಕಹಾನೀ (ರಾಣಿ ಕೇತಕಿಯ ಕಥೆ) ಅಥವಾ ಉದಯಭಾನಚರಿತ ಎಂಬ ಪುಸ್ತಕದಲ್ಲಿ ಕಥೆಯ ಉದ್ದೇಶವನ್ನು ಹೀಗೆ ಹೇಳಿಕೊಂಡಿದ್ದಾನೆ: ಹಿಂದೀ ಭಾಷೆಯಲ್ಲಿರುವುದನ್ನು ಬಿಡಬಾರದು. ಅನ್ಯಭಾಷೆಗಳದ್ದನ್ನು ತೊಡಲೂಬಾರದು (ಹಿಂದವೀ ಛೂಟ್ ಔರ್ ಕಿಸೀ ಬೋಲೀಕಾ ಫೂಟ್ ನ ಹೋ). ಅನ್ಯಭಾಷೆಯ ಜನ ಪ್ರಾದೇಶಿಕ ಭಾಷೆಗೆ ತೋರಬೇಕಾದ ಗೌರವ, ನಿಷ್ಠೆಗಳ ಮನೋಹರವಾದ ಮಾದರಿ ಇದಾಗಿದೆ.

	ಹಿಂದೀ ಭಾಷೆಯ ಮೊದಲ ಕಥೆಯೆಂದು ಐತಿಹಾಸಿಕ ಮಹತ್ತ್ವವುಳ್ಳ ರಾಣೀ ಕೇತಕಿಯ ಕಥೆ 1798-1803ರ ಅವಧಿಯಲ್ಲಿ ರಚಿತವಾಗಿರಬೇಕೆಂದು ವಿದ್ವಾಂಸರ ಅಭಿಪ್ರಾಯ.

	ಇನ್ಯಾ ಮೊದಲು 2ನೆಯ ಶಾಹ ಅಲಮ್‍ನ ದರಬಾರಿನಲ್ಲಿ ಆಶ್ರಯ ಪಡೆದಿದ್ದ. ಅಲ್ಲಿ ಇವನ ಖ್ಯಾತಿಯೂ ಬೆಳೆದಿತ್ತು. ಗುಲಾಮ ಕಾದಿರ್ ಎಂಬ ವಿದ್ರೋಹಿ ಬಾದಶಹನ ಕಣ್ಣು ಕಿತ್ತು, ಅವನ ಭಂಡಾರವನ್ನು ಸುಲಿದೊಯ್ದ ಅನಂತರ, ಉಪಜೀವಿಕೆಗಾಗಿ ಇನ್ನಾ ಲಖನೌ ನವಾಬನಾದ ಸಾದತ್ ಆಲಿಖಾನನನ್ನು ಆಶ್ರಯಿಸಿದ. ಅಂದಿನ ಕಾಲದ ಜನತೆಯ ಭಾಷೆಯಲ್ಲಿ ಮನೋರಂಜಕವಾದ ಕಥೆಯನ್ನು ಬರೆದು ಹಿಂದೀ ಭಾಷೆಯ ಅಭಿವೃದ್ಧಿಗೆ, ಭದ್ರತೆಗೆ ಕಾರಣರಾದವರಲ್ಲಿ ಒಬ್ಬನೆಂದು ಇವನ ಖ್ಯಾತಿ. ಆಧುನಿಕ ಹಿಂದೀ ಸಾಹಿತ್ಯದ ಇತಿಹಾಸದಲ್ಲಿ ಈತನ ಹೆಸರು ಅಮರವಾದದ್ದು ಎನ್ನುವುದರಲ್ಲಿ ಸಂದೇಹವಿಲ್ಲ.

	ಹಿಂದೀ ಗದ್ಯದ ವಿಕಾಸಮಾಲೆಗೆ ಸುಂದರವಾದ, ಸುಗಂಧಪೂರ್ಣವಾದ, ವರ್ಣರಂಜಿತವಾದ ಪುಷ್ಪವೊಂದನ್ನು ಇನ್ಯಾ ನೀಡಿ ಕೃತಾರ್ಥನಾದ ಎಂದು ಪ್ರೊ. ಮೋಹನ ಲಾಲ ಜಿಜ್ಞಾಸು ತಮ್ಮ ಹಿಂದೀ ಗದ್ಯ ವಿಕಾಸವೆಂಬ ಗ್ರಂಥದಲ್ಲಿ ಬಣ್ಣಿಸಿದ್ದಾರೆ.

	ಅಂದಿನ ಉರ್ದು ಮತ್ತು ಪಾರಸಿ ಕವಿಗಳಲ್ಲಿ ಇನ್ಯಾ ಬಹು ಪ್ರಸಿದ್ಧ ವ್ಯಕ್ತಿಯಾಗಿದ್ದ. ಈತ ಅನೇಕ ಶೇರ್‍ಗಳನ್ನು (ಗೀತೆ) ರಚಿಸಿ ಉರ್ದು ಶಾಯರಿಗೆ ಒಂದು ಹೊಸ ಕಳೆಯನ್ನೇ ತಂದ. ಉರ್ದು ಮತ್ತು ಪಾರಸಿ ಭಾಷೆಗಳಲ್ಲಿ ಈತ ಅಮೂಲ್ಯವಾದ ಕೃತಿಗಳನ್ನು ರಚಿಸಿದ್ದಾನೆ. ಪಾರಸಿ ಭಾಷಾವಿಜ್ಞಾನ, ಉರ್ದು ವ್ಯಾಕರಣ, ಅಲಂಕಾರ, ಕಾವ್ಯಶಾಸ್ತ್ರ ಮುಂತಾದ ವಿಷಯಗಳ ಮೇಲೆ ಅತ್ಯಮೂಲ್ಯವಾದ ಗ್ರಂಥಗಳನ್ನು ರಚಿಸಿ ಮುಂದಿನ ಪೀಳಿಗೆಗೆ ಒದಗಿಸಿದ್ದಾನೆ. ದರಿಯಾಯೆ ಲತಾಫತ್, ಲತಾಯಫುಸ್ಸಆದತ್, ಕುಲಯಾತೆ ಇನ್ನಾ-ಇವು ಅವನ ಇತರ ಪ್ರಸಿದ್ಧ ಗ್ರಂಥಗಳು.						
(ಆರ್.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ